ipledge

mangalagouyatre-srs-travels

mangalagouyatre-sheshagiri-bhat

Mangala Gou Yatra Map

ಪ್ರಧಾನಮಂತ್ರಿಗಳೇ ಗೋಹತ್ಯೆ ನಿಷೇಧಿಸಿ – ಶ್ರೀಸಂಸ್ಥಾನ

ಜ.29, ಮಂಗಳೂರು :
ಗೋವು ಜೀವವೂ ಹೌದು, ದೇವನೂ ಹೌದು. ದೇವರೂ ಪೂಜಿಸುವ ದೇವರು ಗೋವು. ಕಳಂಕವಿಲ್ಲದ ಅಕಳಂಕಚರಿತ ಸ್ವರೂಪ ಗೋಮಾತೆ. ಇಂತಹಾ ಗೋಮಾತೆಯ ಹತ್ಯೆಯನ್ನು ನಿಷೇಧಿಸಿ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಆಗ್ರಹಿಸಿದರು.

ಮಂಗಳೂರು,ಕುಳೂರಿನ ಮಂಗಲಭೂಮಿಯಲ್ಲಿ ಶ್ರೀರಾಮಚಂದ್ರಾಪುರಮಠದ ಆಯೋಜನೆಯಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಮಹಾಮಂಗಲದ ಅಂಗವಾಗಿ ಮಹಾನಂದಿ ವೇದಿಕೆಯಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಬದುಕಿದರೆ ಗೋವಿನಂತೆ ಬದುಕಬೇಕು. ಮಡಿದರೆ ಮಂಗಲಪಾಂಡೆಯಂತೆ ಮಡಿಯಬೇಕು. ಕಣ್ಣೆದುರು ಗೋವಿಗಾಗಿ ನೆಡೆಯುವ ಅನ್ಯಾಯದ ವಿರುದ್ಧ ಪ್ರಥಮವಾಗಿ ಸಿಡಿದು ನಿಂತವನು ಮಂಗಲಪಾಂಡೆ. ನಮಗಾಗಿ ಬದುಕುವ ಗೋವು ಗೋವಿಗಾಗಿ ಮಿಡಿದ, ಗೋವಿಗಾಗಿ ಮಡಿದ ಮಂಗಲಪಾಂಡೆ. ಈ ಎರಡೂ ಚೇತನಗಳ ಸಮ್ಮಿಲನ ಮಂಗಲಗೋಯಾತ್ರೆ. ಇದರ ಮೂಲಕ ಮಂಗಲಪಾಂಡೆಯ ಮರುಹುಟ್ಟಾಗಿದೆ ಎಂದರು.

ಶ್ರೇಷ್ಟ ತ್ರಿವೇಣಿ ಸಂಗಮ
ಸಂತಸಂಕುಲ, ಸುರಭಿಸಂತತಿ, ಸಮಾಜ ಸಮಷ್ಟಿ ಮೂರೂ ಸೇರಿರುವ ಈ ತ್ರಿವೇಣಿ ಸಂಗಮ ಗೋವಿನ ರಕ್ಷಣೆಗೆ ಸಾಕು. ನಿಜ ತ್ರಿವೇಣಿ ಸಂಗಮ ಮುಕ್ತಿಯಾದರೆ ಇಲ್ಲಿನ ತ್ರಿವೇಣಿ ಸಂಗಮ ಗೋಭಕ್ತಿ. ಹಾಗಾಗಿ ಇದು ತ್ರಿವೇಣಿ ಸಂಗಮಕ್ಕಿಂತ ಶ್ರೇಷ್ಟ ಎಂದರು.

ಸತ್ತು ಸತ್ತು ಬೇಸತ್ತ ಗೋಮಾತೆ
ಸತ್ತು ಸತ್ತು ಬೇಸತ್ತ ಗೋಮಾತೆಯ ಉಳಿವಿಗಾಗಿ ನೆಡೆದಿರುವುದು ಗೋಯಾತ್ರೆ. ಇದು ಕೇವಲ ಯಾತ್ರೆಯಲ್ಲ. ಕ್ರಾಂತಿ. ಇದು ಸಂಭ್ರಮವಲ್ಲ. ಆಂದೋಲನ ಎಂದರು.

ಅಸಂಖ್ಯ ಗೋಭಕ್ತರನ್ನು ಪೋಣಿಸುವ ಸೂತ್ರ ಗೋಮಾತೆ
ಈ ಭಾರತದಲ್ಲಿ ಎಲ್ಲರೂ ಒಪ್ಪುವ ಸಂಗತಿಯಿಲ್ಲ. ಎಲ್ಲರೂ ಒಪ್ಪುವ ಸಂತಿಯಿದ್ದರೆ ಅದು ಗೋವು ಮಾತ್ರ. ಗೋಮಾತೆಯ ಪಕ್ಷದಲ್ಲಿ ಜಾತಿ, ಮತ, ಪಂಥಗಳನ್ನು ಮರೆತು ಎಲ್ಲರೂ ಒಂದಾಗುತ್ತಾರೆ. ಅದಕ್ಕಾಗಿಯೇ ಸಮಾಜ, ಸಂತರು ಹಾಗೂ ಸರ್ಕಾರದ ಪ್ರತಿನಿಧಿಗಳು ಇಲ್ಲಿ ಸೇರಿದ್ದಾರೆ‌. ಸಮಸ್ತ ಸಮಾಜವನ್ನು ಸೇರಿಸುವ ಸೂತ್ರ ಗೋಮಾತೆ ಎಂದರು.

ಭದ್ರ ಕೋಟೆಯಲ್ಲಿ ಗೋಮಾತೆ
ಸಾವಿರ ಸಂತರು ವೇದಿಕೆಯಲ್ಲಿ, ಸಮಾಜ ವೇದಿಕೆಯ ಎದುರಿನಲ್ಲಿ. ಇದರ ನಡುವೆ ಗೋಮಾತೆ ವಿರಾಜಮಾನಳಾಗಿದ್ದಾಳೆ. ಇದೇ ರೀತಿ ಸಮಾಜ ಮತ್ತು ಸಂತರ ಕೋಟೆಯಲ್ಲಿ ಗೋಮಾತೆ ಸುರಕ್ಷಿತವಾಗಬೇಕು ಎಂದರು.

ರಾಜ್ಯಸರ್ಕಾರಕ್ಕೆ…
ರಾಸಾಯನಿಕ ಕೃಷಿ ತ್ಯಜಿಸಿ ಗವ್ಯೋತ್ಪನ್ನಗಳಿಗೆ ಪ್ರೋತ್ಸಾಹ ನೀಡಿ ಗೋಹತ್ಯೆ ನಿಷೇಧಕ್ಕೆ ರಾಜ್ಯಸರ್ಕಾರ ಅಧಿಕಾರಾವಧಿಯಲ್ಲಿ ನಿರ್ಣಯ ಕೈಗೊಳ್ಳಲಿ. ಅಧಿಕಾರದ ಮೂಲ ಸಂವಿಧಾನ. ಸಂವಿಧಾನದಲ್ಲೇ ಹೇಳಿರುವ ಗೋವಿಗೆ ಪ್ರಾಮುಖ್ಯತೆ ಒದಗಿಸಿ. ಗೋಮಾಳಗಳನ್ನು ಗೋವಿಗಾಗಿಯೇ ಉಳಿಸಿ. ಇಲ್ಲದಿದ್ದರೆ ಕ್ರಾಂತಿ ಮಾಡಿಯೇ ಸಿದ್ಧ ಎಂದರು.

ಮಠ ಮತ್ತು ಸಮಾಜ ಗೋವನ್ನುಳಿಸಲಿ
ಕಟುಕರ ಪಾಲಾಗುವ ಗೋವುಗಳಿಗೆ ಮಠ ದಿಕ್ಕಾಗಬೇಕಿದೆ. ಗೋವನ್ನು ಪೀಡಿಸಿ ಬರುವ ಸಂಗತಿಗಳನ್ನು ಸಮಾಜ ತ್ಯಜಿಸಬೇಕಿದೆ ಎಂದರು.

ಕಸಾಯಿಖಾನೆಗೆ…
ಕಸಾಯಿಖಾನೆಗಳನ್ನು ಮಾಡುವ ಬದಲು ಗೋಶಾಲೆಯನ್ನು ಮಾಡಿ ಪ್ರಪಂಚದ ಉತ್ತಮ ಉದ್ಯಮ ಗೋವನ್ನಾಗಿ ಕಂಡುಕೋಳ್ಳಬೇಕಾದ ಅವಶ್ಯಕತೆ ಇಂದು ಮಾಲಿಕರಿಗಿದೆ. ಗೋವುಗಳನ್ನು ಸಂಬಳಕ್ಕಾಗಿ ಕೊಲ್ಲುವುದಿದ್ದರೆ ಕಟುಕರಿಗೆ ಪರ್ಯಾಯ ಕೆಲಸವನ್ನು ನಾವು ನೀಡಲು ಸಿದ್ಧರಿದ್ದೇವೆ ಎಂದರು.

ಗೋವಿಗಾಗಿ ಬೇಡುವವರಾಗಿ
ನಾವೆಲ್ಲಾ ಗೋಮಾತೆಯ ಪ್ರಾಣಭಿಕ್ಷೆ ಕೇಳಲು ಸೇರಿದ್ದೇವೆ. ಸಂತರು ಬೇಡುವ ಆಶ್ರಮದವರಾದರೆ ಸಮಾಜ ನೀಡುವ ಆಶ್ರಮದವರು‌. ಆದರೆ ಗೋವಿಗಾಗಿ ಸಮಾಜವೂ ಬೇಡುವುದಾದಲ್ಲಿ ಸಮಾಜಕ್ಕೆ ಇನ್ಯಾವುದೇ ಬೇಡಿಕೆಗಳು ಉಳಿಯುವುದಿಲ್ಲ ಎಂದರು.

ಮಂಗಲಭೂಮಿಯ ಕುರಿತು…
ಗೋವಿಗೆ ಮಂಗಲವನ್ನು ತಂದುಕೊಟ್ಟು ಮಂಗಳೂರಿನ ಹೆಸರು ನಿಜಾರ್ಥದಲ್ಲಿ ಮಂಗಲದ ಊರೇ ಆಯಿತು. ಸಂತರು, ಸಮಾಜ, ಸುರಭಿ ಸೇರಿದ ಈ ನಾಡು ಧನ್ಯವಾಯಿತು ಎಂದರು.

ಗೋಮಾಂಸದ ರಫ್ತು ನಿಷೇಧಿಸಿ, ಗೋಮೂತ್ರದ ರಫ್ತಿಗೆ ಸರ್ಕಾರ ಮುಂದಾಗಬೇಕಿದೆ. ನಮ್ಮ ತಾಯಿಯನ್ನು ಕಡಿದು ಬೇರೆ ರಾಷ್ಟ್ರಕ್ಕೆ ನೀಡುವುದು ಅಕ್ಷಮ್ಯ. ತಳಿಸಂಕರವನ್ನು ತಪ್ಪಿಸಿ, ಇಡೀ ದೇಶ ಎ2 ಹಾಲೆಂಬ ಅಮೃತ ಕುಡಿಯುವಂತಾಗಲಿ ಎಂದು ಗೋಸಂದೇಶ ನೀಡಿದರು.

ಗಂವ್ಹಾರದ ಪೂಜ್ಯರಾದ ಪಾಂಡುರಂಗ ಮಹಾರಾಜರು ಮಾತನಾಡಿ, ಶತಶತಮಾನಗಳಿಂದ ಗೋವಿನ ನೋವಿನ ಕೂಗು ನಿಂತಿಲ್ಲ. ಇದನ್ನು ನಿಲ್ಲಿಸಲಾಗಿಯೇ ಸಹಸ್ರಾರು ಸಂತರು ಮಹಾಮಂಗಲಕ್ಕೆ ಸಹಕಾರ ನೀಡಿದ್ದಾರೆ. ಗೋವಿನ ಬಗೆಗಿನ ಸಂಶೋಧನೆಗಳು ಇನ್ನೂ ಮುಂದುವರೆಯಲಿ ಎಂದರು.

ಶ್ರೀ ವಿದ್ಯಾವಾಚಸ್ಪತಿ ಸಂತೋಷಭಾರತೀ ಸ್ವಾಮಿಗಳು ಮಾತನಾಡಿ, ಈ ದೇಶದಲ್ಲಿ ಮೊತ್ತಮೊದಲ ಬಾರಿಗೆ ಗೋವಿಗಾಗಿ ಸಂತರ ಸಂಗಮ ಏರ್ಪಟ್ಟಿದೆ. ಇಷ್ಟು ಸಂತರು ಸೇರಿರುವುದು ಧರ್ಮಕ್ಕೆ ಸಂದ ಜಯ. ಈ ದೇಶದ ಸಂಪತ್ತಿಗಾಗಿ ಗೋವಿನ ರಕ್ಷಣೆ ಮಾಡಬೇಕಿದೆ. ಗೋವನ್ನು ಒಳಗೊಂಡ ಕ್ರೀಡೆಯಲ್ಲಿ ಹೊಡೆಯುವ ಕಾರಣಕ್ಕಾಗಿಯೇ ನಿಷೇಧಿಸುತ್ತಾರೆಂದರೆ, ಗೋವನ್ನು ಕಡಿದು ಕೊಲ್ಲುವ ಬಗ್ಗೆ ಈ ಬಗೆಯ ಕನಿಕರ ಯಾಕಿಲ್ಲ? ಕೋಣವನ್ನು ಕಡಿಯಬಾರದು ಎಂದು ಹೇಳುವವರು ಗೋವನ್ನು ಕಡಿಯುವುದನ್ನೂ ನಿಲ್ಲಿಸಬೇಕು. ಈ ದಿಸೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಬಲ್ಲ ಸಮಾವೇಶವಿದು ಎಂದರು.

ಶ್ರೀ ಕಲ್ಯಾಣ ಸ್ವಾಮೀಜಿಯವರು ಮಾತನಾಡಿ, ಭಾರತಮಾತೆ ಎಂದರೆ ಗೋಮಾತೆ ಎನ್ನುವ ನಿಟ್ಟಿನಲ್ಲಿ ರಾಘವೇಶ್ವರ ಶ್ರೀಗಳು ಪ್ರಯತ್ನಿಸುತ್ತಿದ್ದಾರೆ. ಬೆಳ್ಳಗಿದ್ದದ್ದೆಲ್ಲಾ ಹಾಲಾಗುವುದಿಲ್ಲ. ಕೆಲವು ಹಾಲಾಹಲವೂ ಇರಬಹುದು. ನಮ್ಮ ದೇಶದ ಗೋವುಗಳ ಹಾಲು ಅತ್ಯಂತ ಶ್ರೇಷ್ಟವಾದುದು. ಗೋಮಾತೆಯ ನೋವು ಅಳಿದು ಗೋಮಾತೆಯ ನಲಿವು ಹೆಚ್ಚಿದಾಗ ಮಾತ್ರ ದೇಶದ ಉಳಿವು ಸಾಧ್ಯ. ಇದಕ್ಕಾಗಿ ರಾಘವೇಶ್ವರ ಶ್ರೀಗಳೊಡನೆ ನಾವಿದ್ದೇವೆ. ಗೋಮಾತೆಯ ನೋವಿಗೆ ಮಿಡಿಯುವವರೇ ನಿಜವಾದ ಸಂತರು ಎಂದರು.

ಒಡಿಯೂರಿನ ಪೂಜ್ಯರು ಮಾತನಾಡಿ, ಸಂತರು ಹಾಗೂ ಸಮಾಜ ಒಂದಾಗಿರುವುದು ಗೋವಿಗಾಗಿ. ಇಂತಹಾ ರಾಷ್ಟ್ರೋತ್ಥಾನದ ಕಾರ್ಯಕ್ಕೆ ಮುಂದಾಗಿರುವ ರಾಘವೇಶ್ವರ ಶ್ರೀಗಳ ಕೃತಿ ಅವಿಸ್ಮರಣೀಯ ಎಂದರು.

ಡಾ.ಸುಬ್ರಮಣಿಯನ್ ಸ್ವಾಮಿಯವರು ಮಾತನಾಡಿ, ಗೋವನ್ನು ರಕ್ಷಿಸುವುದು ಮುಖ್ಯವೆಂದು ಸಂವಿಧಾನದಲ್ಲೇ ಗುರುತಿಸಲಾಗಿದೆ. ಗೋಹತ್ಯೆ ನಿಷೇಧ ಹಾಗೂ ಸ್ವರಾಜ್ಯದಲ್ಲಿ ಗೋಹತ್ಯೆ ನಿಷೇಧವೇ ಮುಖ್ಯವೆಂದು ಗಾಂಧೀಜಿಯವರೂ ಸಾರಿದ್ದರು. ವಿಶ್ವದ ಯಾವ ದೇಶದ ಗೋವುಗಳೂ ನಮ್ಮ ದೇಶದ ಗೋವು ನೀಡುವ ಹಾಲಿನಷ್ಟು ಉತ್ಕೃಷ್ಟ ಮಟ್ಟದ ಹಾಲು ನೀಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಮ್ಮ ದೇಶದ ಗೋವುಗಳನ್ನು ವಿವಿಧ ದೇಶಗಳಲ್ಲಿ ಸಾಕುತ್ತಿದ್ದಾರೆ. ಯಾವ ಧರ್ಮದಲ್ಲೂ ಗೋಹತ್ಯೆ ಅನಿವಾರ್ಯ ಎಂದು ಹೇಳಿಲ್ಲ. ಯಾರು ಗೋಹತ್ಯೆ ಮಾಡುತ್ತಾರೋ ಅವರಿಗೆ ಮರಣದಂಡನೆಯನ್ನು ವಿಧಿಸಬೇಕು. ಇದಕ್ಕೆ ನನ್ನಿಂದ ಸಾಧ್ಯವಾದ ಪ್ರಯತ್ನ ಮಾಡುತ್ತೇನೆ ಎಂದರು.

ಉಡುಪಿ ಪರ್ಯಾಯ ಪೀಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದರು ಮಾಧ್ಯಮದ ಮೂಲಕ ತಮ್ಮ ಗೋಸಂದೇಶವನ್ನು ನೀಡಿರುವ ಮುದ್ರಣವನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಸಾವಿರ ಮೀರಿದ ಸಂತಸಮೂಹ, ಸಾವಿರ ಮೀರಿದ ಗಣ್ಯಮಾನ್ಯರು, ಲಕ್ಷಕ್ಕೂ ಮೀರಿದ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು‌. ಅನೇಕ ಗೋ ಪ್ರದರ್ಶನಗಳು, ಗೋ ಉತ್ಪನ್ನಗಳ ಮಾರಾಟ, ಗೋ ಉತ್ಪನ್ನ ಆಧಾರಿತ ಖಾದ್ಯಗಳು, ಗೋಭಕ್ತರನ್ನು ಆಕರ್ಷಿಸಿದವು.

ಗೋಮೂತ್ರದ ಮೇಲೇ ವಿಶ್ವವಿದ್ಯಾಲಯ ತೆರೆಯಬಹುದು – ಶ್ರೀಸಂಸ್ಥಾನ

ಜ.28, ಮಂಗಳೂರು :
ಪಾತ್ರೆ ಎಷ್ಟು ದೊಡ್ಡದಿದೆಯೋ ಅಷ್ಟು ಮಾತ್ರ ನೀರು ತೆಗೆದುಕೊಳ್ಳಲು ಸಾಧ್ಯ. ನಾವು ಗಮನಿಸಿಕೊಂಡದ್ದು ಮಾತ್ರ ಮನನ ಮಾಡಿಕೊಳ್ಳಲು ಸಾಧ್ಯ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಆಶೀರ್ವಚನವಿತ್ತರು.

ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಮಹಾಮಂಗಲದ ಅಂಗವಾಗಿ ಕುಳೂರಿನ ಮಂಗಲಭೂಮಿಯಲ್ಲಿ ನೆಡೆದ ಗೋಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ದಿಲ್ಲಿಯ ಸಂಸತ್ತಿಗಿಂತ ಗೋಸಂಸತ್ತು ಹೆಚ್ಚಿನದು. ಗೋಮೂತ್ರ, ತುಪ್ಪ, ಗೋಮಯಗಳ ಮೇಲೂ ವಿಶ್ವವಿದ್ಯಾಲಯ ತೆರೆಯುವಷ್ಟು ವಿಶೇಷತೆಗಳನ್ನು ಗೋವು ಒಳಗೊಂಡಿದೆ. ದೇಹದ ದೋಷ ಮಾತ್ರವಲ್ಲ. ದೇಶದ ದೋಷವನ್ನೂ ನಿವಾರಣೆ ಮಾಡಬಲ್ಲ ಸಾಮರ್ಥ್ಯ ಗೋವಿಗಿದೆ. ಗೋವಿನ ಸತ್ಯ ಅರ್ಥೈಸಿ, ಮಿಥ್ಯ ದೂರಗೊಳಿಸೋಣ ಎಂದು ಗೋಸಂದೇಶ ನೀಡಿದರು.

ಕಾರ್ಯಕ್ರಮದ ನಂತರ ವಿವಿಧ ದೇಶಗಳ ಖ್ಯಾತ ವಿಜ್ಞಾನಿಗಳಿಂದ ಗೋಜಾಗೃತಿ ಪ್ರಬಂಧಗಳು ಮಂಡಿಸಲ್ಪಟ್ಟವು. ಈ ಸಂದರ್ಭದಲ್ಲಿ ಜಯರಾಮ್ ಭಟ್, ಸುಧಾಮ, ಅಲೆಕ್ಸ್ ಹಾಂಕೆ, ಡಾ.ಕೆ.ಪಿ. ರಮೇಶ್, ಡಾ.ವಿನಯ್ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.

 

ಜನವರಿ 27.01-2017
ಶ್ರೀರಾಮಚಂದ್ರಾಪುರಮಠದ ಆಯೋಜನೆಯಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಮಹಾಮಂಗಲಕ್ಕೆ ಪೂರ್ವಭಾವಿಯಾಗಿರುವ ಮಂಗಲ ಆವಾಹನಾಯಾತ್ರೆಯ ದಶರಥಗಳು ಇಂದು ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದಿಂದ ಸಂಚಾರ ಆರಂಭಿಸಿದವು.

ಕಬಕ, ಪೊಳ್ಯ, ವಿವೇಕಾನಂದ ಕಾಲೇಜು ಪುತ್ತೂರು, ಕಲ್ಕುಡ ದೇವಸ್ಥಾನ ಕಲ್ಲೇಗ, ತೆಂಕಿಲ ವಿವೇಕಾನಂದ ಪ್ರೌಢಶಾಲೆ, ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ, ಲಕ್ಷ್ಮೀವೆಂಕಟರಮಣ ದೇವಸ್ಥಾನ ಉಪ್ಪಿನಂಗಡಿ, ಪೆರ್ನೆ, ಬುಡೋಳಿ, ಮಾಣಿ, ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ, ಮೇಲ್ಕಾರು, ಬಿ.ಸಿ.ರೋಡ್ ಗಳಲ್ಲಿ ಪೂಜೆ ಸ್ವೀಕರಿಸಿ ಮಹಾಮಂಗಲಕ್ಕೆ ಆಹ್ವಾನವಿತ್ತಿತು.

ಕಬಕದಲ್ಲಿ ನೆಡೆದ ವೇದೋಕ್ತ ಮಂತ್ರಘೋಷದ ಸ್ವಾಗತ, ವಿವೇಕಾನಂದ ಕಾಲೇಜಿನಲ್ಲಿ ಗೋಯಾತ್ರೆಗೆ ಸ್ವಾಗತ ಕೋರಿದ ಮೂರು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಹೆಜ್ಜೆಹೆಜ್ಜೆಗೆ ಗೋಭಕ್ತರು ಶುಭ ಹಾರೈಸಿದ್ದು ಇಂದಿನ ವಿಶೇಷವಾಗಿ ಕಂಡುಬಂದಿತು.

ಈ ಸಂದರ್ಭದಲ್ಲಿ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದು ಗೋರಥಕ್ಕೆ ಪೂಜೆ ಸಲ್ಲಿಸಿ, ಮಹಾಮಂಗಲಕ್ಕೆ ಶುಭ ಹಾರೈಸಿದರು.

ಅಮಂಗಲಕ್ಕೇ ಅಮವಾಸ್ಯೆ ಬಂದಿದೆ – ಶ್ರೀಸಂಸ್ಥಾನ

ಜ.27, ಮಂಗಳೂರು :
ಭಾರತ ಮಂಗಲಮಯವಾಗಿರದಿದ್ದರೆ ವಿಶ್ವವೇ ಇರುತ್ತಿರಲಿಲ್ಲ. ಅಂದಿನಿಂದ ಇಂದಿನವರೆಗೆ ಸಂಸ್ಕೃತಿ ಉಳಿವಿನಿಂದಲೇ ಭಾರತ ಉಳಿದಿದೆ. ಗೋಯಾತ್ರೆಯ ಮಹಾಮಂಗಲದ ಮೂಲಕ ಅಮಂಗಲಕ್ಕೇ ಅಮವಾಸ್ಯೆ ಬಂದಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ, ಹೊಸನಗರ ಇವರು ಅಭಿಪ್ರಾಯಪಟ್ಟರು.

ಶ್ರೀರಾಮಚಂದ್ರಾಪುರಮಠದ ನೇತೃತ್ವದಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಮಹಾಮಂಗಲದ ಅಂಗವಾಗಿ ನೆಡೆದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು,
ಬಿಂದುಗಳೆಲ್ಲವೂ ಸೇರಿ ರಂಗವಲ್ಲಿಯಾಗುತ್ತಿದೆ. ನಾವು ಕನ್ನಡಿಗರು, ಶೈವರು, ವೈಷ್ಣರು, ತಮಿಳಿನವರು, ತೆಲುಗಿನವರು ಆಗಿದ್ದೇವೆ. ಆದರೆ ಭಾರತೀಯರು ಆಗಿದ್ದು ಯಾವಾಗ? ಈ ಭಾರತೀಯತೆಯನ್ನು ಕಾಣಿಸಿಕೊಟ್ಟದ್ದು ಮಂಗಲಗೋಯಾತ್ರೆ ಎಂದರು.

ಧರ್ಮ ಕ್ಷೀಣಿಸಿದಾಗ ಗೋವು ಕ್ಷೀಣಿಸಿದವು. ಗೋವು ಕ್ಷೀಣಿಸಿದಂತೆ ಜೊತೆಗೇ ಧರ್ಮವೂ ಕ್ಷೀಣಿಸಿತು. ಸಂತ ಸಮುದಾಯವೇ ಇಂಜಿನ್ನುಗಳಾಗಿ ಗೋಭಕ್ತರೇ ಬೋಗಿಗಳಾದಾಗ ಮಾತ್ರ ಗೋರಕ್ಷಣೆಯ ಬಂಡಿ ಸಾಗಲು ಸಾಧ್ಯ. ಸಂತರ ತ್ಯಾಗ, ಗೋಭಕ್ತರಾದ ‘ಭೋಗಿಗಳು’ ಒಂದಾಗಿ ಗೋರಕ್ಷಣೆಗೆ ಮುಂದಾಗಬೇಕು. ಭೋಗ ತ್ಯಾಗಗಳ ತುಲಾಭಾರವಾದಾಗ ಮಾತ್ರ ಗೋರಕ್ಷಣೆಗೆ ಕಷ್ಟವಾಗಲಾರದು ಎಂದರು.

ಗೋಯಾತ್ರೆಯ ಮೂಲಕ ಪ್ರಚಂಡ ಶಕ್ತಿಯ ಆವಿರ್ಭಾವವಾಗುತ್ತಿದೆ. ಸಂಪೂರ್ಣ ವಿಶ್ವಾಸದಿಂದ ಈ ಕಾರ್ಯಕ್ಕೆ ಮುಂದಾಗೋಣ. ದೇಶದೆಲ್ಲೆಡೆಯ ದಾರಿಗಳೂ ಮಂಗಲಭೂಮಿಗೇ ಬರಲಿ. ಗೋವಿನ ಜೊತೆ ಕೋಟಿ ಮಂದಿಯಿದ್ದಾರೆಂದು ಜಗತ್ತಿಗೇ ತಿಳಿಯಲಿ ಎಂದರು.

ಇನ್ನು ಗೋವಿನ ಸುತ್ತಲೂ ಕೋಟೆ ನಿರ್ಮಾಣವಾಗಲಿದೆ. ಇನ್ನು ಈ ಅನ್ಯಾಯ ನೆಡೆಯಬಾರದು ಹಾಗೂ ಯಾವುದೇ ಕಾರಣಕ್ಕೂ ಗೋವಿಗಾಗುವ ಸಂಕಷ್ಟ ಮುಂದುವರೆಯಬಾರದು. ಮಮ ದೀಕ್ಷಾ ಗೋ ರಕ್ಷಾ ಎಂದು ಗೋಸಂದೇಶ ನೀಡಿದರು.

ಶ್ರೀರೇಣುಕಾನಂದ ಸ್ವಾಮೀಜಿಯವರು ಮಾತನಾಡಿ, ಹುಲ್ಲನ್ನು ತಿಂದ ಹಸು ಹಾಲು ನೀಡುತ್ತದೆ. ಗೋವಿನಿಂದ ವಿಸರ್ಜಿಸಲ್ಪಡುವುದೂ ಪೂಜ್ಯವಾಗುತ್ತದೆ. ರೈಲಿನ ಬೋಗಿಗಳು ನಾವಾದರೆ ರಾಘವೇಶ್ವರ ಶ್ರೀಗಳೇ ಇಂಜಿನ್. ನಾವೆಲ್ಲರೂ ಒಂದೊಂದು ಗೋವನ್ನಾದರೂ ಸಾಕಿದರೆ ಈ ಯಾತ್ರೆ ಯಶಸ್ವಿಯಾದಂತೆ ಎಂದರು.

ಬ್ರಹ್ಮಕುಮಾರಿ ವಿಶ್ವೇಶ್ವರೀಯವರು ಮಾತನಾಡಿ, ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಗೋವು ಚಡಪಡಿಸುತ್ತದೆ. ಮಂಗಳೂರಿನ ಪ್ರತೀ ಬೀದಿಗಳಲ್ಲಿ ಗೋವು ನಿರ್ಭಯವಾಗಿ ಓಡಾಡುವಂತ ದಿನಗಳು ಬರಲಿ. ಇದಕ್ಕಾಗಿ ಸಂತ ಸಮೂಹವೇ ರಾಘವೇಶ್ವರ ಶ್ರೀಗಳ ಒಡನಿದ್ದೇವೆ ಎಂದರು.

ಡಾ.ಕಲ್ಲಡ್ಕ ಪ್ರಭಾಕರ್ ಭಟ್ ರವರು ಮಾತನಾಡಿ, ಅನೇಕ ವರ್ಷಗಳ ತಪಸ್ಸು ಗೋವನ್ನು ಉಳಿಸಬೇಕು ಎನ್ನುವುದು. ಅದಕ್ಕಾಗಿ ಮಂಗಲಗೋಯಾತ್ರೆಯ ಮಹಾಮಂಗಲದ ವೇದಿಕೆ ಅಣಿಯಾಗಿದೆ. ಇಡೀ ಸಮಾಜದ ಆರೋಗ್ಯ ಕೆಟ್ಟುಹೋಗಿದೆ. ಈ ಆರೋಗ್ಯವನ್ನು ಗೋವಿನ ಉಳಿವಿನ ಮೂಲಕ ರಕ್ಷಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಪೂರ್ವದಲ್ಲಿ ನಗರದಾದ್ಯಂತ ವೈಭವೋಪೇತ ಶೋಭಾಯಾತ್ರೆ ನೆರವೇರಿತು.

ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀರಾಜಶೇಖರಾನಂದ ಸ್ವಾಮೀಜಿ, ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀವಿಖ್ಯಾತಾನಂದ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನವಿತ್ತರು. ಅನೇಕ ಗಣ್ಯ ಮಾನ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿಜಯ ಕರ್ನಾಟಕ 27-01-2017, ಪುಟ 2
ಸುದ್ದಿ ಬಿಡುಗಡೆ 27-01-2017, ಪುಟ 4
ಕನ್ನಡ ಪ್ರಭ 27-01-2017, ಪುಟ 4
ಕನ್ನಡ ಪ್ರಭ 27-01-2017, ಪುಟ 4
Back To Top